ತೆನೆ ಕುರಿತು

ಆಧುನಿಕ ಜಗತ್ತಿಗೆ ತೆರೆದುಕೊಳ್ಳುವಿಕೆ ಮತ್ತು ಕನ್ನಡ ಜಗತ್ತಿನ ವಿಸ್ತರಿಸುವಿಕೆಯ ಭಾಗವಾಗಿ ಸಾಹಿತ್ಯದ ಆಸಕ್ತಿ ಇರುವ ಸಮಾನ ಮನಸ್ಕರರ ಯುವಜನರ ಗುಂಪೊಂದು ತೆನೆ ಎನ್ನುವ ಹೆಸರಿನೊಂದಿಗೆ ಬಳಗವೊಂದನ್ನು ಕಟ್ಟಿಕೊಂಡು ಸಾಹಿತ್ಯದ ಕೃಷಿಯಲ್ಲಿ ತೊಡಗಿದ್ದೇವೆ. ತೆನೆಯು ಕಥನ, ಕಾವ್ಯ, ವಿಮರ್ಶ, ಮಾತುಕತೆ, ದೃಶ್ಯಕಲೆ ಇವುಗಳನ್ನು ಒಳಗೊಂಡಿರುವ ಕನ್ನಡದ ವೆಬ್‌ಸೈಟ್ ಆಗಿದೆ.

ತೆನೆಯ ಕಥನವು ; ಕಥೆ, ಸಣ್ಣಕಥೆ, ಪ್ರಬಂಧ- ಹರಟೆ, ಪ್ರವಾಸ, ಜಾನಪದ, ಜೀವನಚರಿತ್ರೆ, ಸಂಶೋಧನೆ, ಹಾಸ್ಯ, ಮಕ್ಕಳ ಸಾಹಿತ್ಯ, ನಿರೂಪಣೆ, ಲೇಖನ, ಕಾದಂಬರಿ ಇತ್ಯಾದಿ ಗದ್ಯ ಪ್ರಕಾರಗಳನ್ನು ಒಳಗೊಂಡಿದೆ.

ಕಾವ್ಯವು ; ಕವನ- ಭಾವಗೀತೆ, ದೇಶಭಕ್ತಿಗೀತೆ, ಚುಟುಕು, ಹನಿಗವನ, ತತ್ವಪದ, ವಚನ, ಕೀರ್ತನೆ, ಕಗ್ಗ, ಒಗಟು, ಇನ್ನು ಮುಂತಾದ ಕಾವ್ಯ ಪ್ರಕಾರಗಳನ್ನು ಒಳಗೊಂಡಿರುತ್ತದೆ.

ವಿಮರ್ಶೆ ; ಇದು ವ್ಯಕ್ತಿ, ದೇಶ, ಕಾಲ, ಪುಸ್ತಕಗಳನ್ನೊಳಗೊಂಡಂತೆ ವಿಮರ್ಶಾತ್ಮಕ ಬರವಣಿಗೆಯಿಂದ ಕೂಡಿರುತ್ತದೆ.

ಮಾತುಕತೆ ; ಮಾತುಕತೆಯು ಚರ್ಚೆ ಮತ್ತು ಸಂದರ್ಶಗಳೆಂಬ ಎರಡು ಕಾಲಂ ಗಳನ್ನು ಹೊಂದಿದೆ. ಚರ್ಚೆಯು ಹೆಸರೇ ಸೂಚಿಸುವ ಹಾಗೆ ಸಾಹಿತ್ಯ ಹಾಗು ಕಾಲಗಟ್ಟಗಳ ಸುತ್ತ ಮತ್ತು ಸಂದರ್ಶನವು ವ್ಯಕ್ತಿ, ಸಾಧನೆ, ಜೀವನಗಳ ಪರಿಚಯಗಳನ್ನು ಒಳಗೊಂಡಿರುತ್ತದೆ.

ದೃಶ್ಯಕಲೆ ; ದೃಶ್ಯಕಲೆಯು ಕಲೆಯ ಕುರಿತಂತಹ ಬರವಣಿಗೆಗಳಿಂದ ಕೂಡಿರುತ್ತದೆ. ಅದು ರಂಗಭೂಮಿ ಕುರಿತಂತಹ ಬರವಣಿಗೆಗಳು, ರಂಗಭೂಮಿ ಮತ್ತು ಸಾಹಿತ್ಯ, ನಾಟಕಗಳು ಇತ್ಯಾದಿ… ಇದರ ಜೊತೆಗೆ ಸಿನಿಮಾ, ಸಿನಿಮಾಗಳಲ್ಲಿ ಸಾಹಿತ್ಯ ಮತ್ತು ಭಾಷಾ ಪ್ರಯೋಗ ಇತ್ಯಾದಿ ವಿಷಯಗಳನ್ನು ಒಳಗೊಂಡಿರುವಂತಹ ಬರಹಗಳಿಂದ ಕೂಡಿರುತ್ತದೆ. ವಿಶೇಷವಾಗಿ ಕಲೆ, ಸಂಪ್ರದಾಯಗಳ ಇತಿಹಾಸ ಮತ್ತು ವಿಶೇಷತೆಗಳನ್ನು ಕುರಿತಂತಹ ಬರವಣಿಗೆಗಳನ್ನು ಸಹ ಈ ದೃಶ್ಯಕಲೆಯು ಒಳಗೊಂಡಿರುತ್ತದೆ.

ಸಾಹಿತ್ಯದಲ್ಲಿ ಶ್ರೇಷ್ಟತೆಯ ಪ್ರಶ್ನೆ ಎದ್ದಿರುವ ಈ ಸಂದರ್ಭಕ್ಕೆ ಸಾಹಿತ್ಯದ ಮಹತ್ವವನ್ನು ಅರ್ಥ ಮಾಡಿಕೊಂಡು, ಸಾಹಿತ್ಯ ಹಾಗೂ ಮನುಷ್ಯ ಎಷ್ಟು ದೂರ ಎಂದು ಚಿಂತಿಸುವುದು ಸಕಾಲಿಕ ಎನಿಸುತ್ತದೆ. ಸಾಹಿತ್ಯವು ಯಾವಾಗಲೂ ಸಮಾಜಕ್ಕೆ ಪ್ರೇರಣೆ ನೀಡುವ ಒಂದು ಮೂಲ ದ್ರವ್ಯವಾಗಿದೆ. ಇದನ್ನೇ ಇನ್ನೊಂದು ಬಗೆಯಲ್ಲಿ ವಿವರಿಸುವುದಾದರೆ ಸಮಾಜವು ನಿರಂತರ ಬದಲಾಗುವ ಹರಿಯುವ ತೊರೆಯಾದರೆ, ಸಾಹಿತ್ಯವು ಆಳವಾದ ಸರೋವರವಾಗಿದೆ. ಇದರಲ್ಲಿ ದಿನಾ ದಿನಾ ಬದುಕುವಂತದ್ದು, ನಿರಂತರ ಬದಲಾಗುವಂತದ್ದು, ಉಬ್ಬರವಿಳಿತದ ಜೀವನವನ್ನು ಹೊಂದುರುವ ಕ್ಷಣಿಕ ಜೀವಿಗಳು ನಾವಾಗಿದ್ದೇವೆ. ಆದರೆ ಸಾಹಿತ್ಯವು ಶಾಶ್ವತವಾದ, ಒಳಗೆ ಮುಳುಗಿದಷ್ಟೂ ಆಳವನ್ನು ಕಾಣಿಸುವ ತಿಳಿ ನೀರ ಕೊಡವಾಗಿದೆ. ಈ ರೀತಿಯ ನಮ್ಮ ಸಣ್ಣ ಸಣ್ಣ ಪ್ರಯತ್ನಗಳು ಈ ಜಗತ್ತಿನಲ್ಲಿ ಎಲ್ಲರೂ ಒಪ್ಪಬಹುದಾದ ಹಾಗೂ ಸಾಹಿತ್ಯ ಲೋಕದಲ್ಲಿ ಬೆರಗನ್ನು ಮೂಡಿಸುವ ನಿರ್ಣಯಗಳಾಗಿ ಹೊರ ಬೀಳಬೇಕೆಂಬುದೇ ತೆನೆಯ ಬಯಕೆ.

ಸಾಹಿತ್ಯ ಕ್ಷೇತ್ರದ ಗರ್ಭದಲ್ಲಿ ಹೊಸ ಪ್ರಯೋಗಗಳ ಅಂಕುರವಾಗುತ್ತಲೇ ಇರಬೇಕು. ಅದು ತೆನೆಯಾಗಿ, ತೆನೆ ಕಾಳಾಗಿ, ಕಾಳು ಬೀಜವಾಗಿ, ಬೀಜ ಮೊಳೆತು ಮೊಳಕೆ ಒಡೆಯಬೇಕು, ಆ ಮೊಳಕೆ ಮೂತಿ ಚಾಚಿ ಮತ್ತೊಂದು ಎತ್ತರಕ್ಕೆ ಈಚುವುದೇ ತೆನೆಯ ದಾರಿ.

tene kannada