ಭಾರತಾಂಬೆ ನೀ ಸ್ವತಂತ್ರಳೇ….?

ಬಂಪೇ ಆರದ ಬಾಲಕಿಯರೆನ್ನದೆ
ಕರುಳ ಬಳ್ಳಿಯ ಸಹೋದರಿಯರೆನ್ನದೆ
ದೇವರ ಸಮಾನ ವೃದ್ಧೆಯರೆನ್ನದೆ
ಅತ್ಯಾಚಾರವನ್ನೆಸಗುವ ಕಾಮಾಂಧ
ಕಟುಕರಿನ್ನು ನಿನ್ನ ಮಡಿಲಲ್ಲಿದ್ದಾರೆ
ಹೇ ಭಾರತಾಂಬೆ ನೀ ಸ್ವತಂತ್ರಳೇ…?

ಪ್ರಾಮಾಣಿಕತೆಯ ಭಾಷೆ ಮಾಡಿ
ಗಾಂಧಿ ಭಾವಚಿತ್ರದಡಿ ಕುಳಿತು
ಅರಿಯದ ಬಡವರಿಗೆ ಮೋಸಮಾಡಿ
ಗಾಂಧಿ ನೋಟಿಗೆ ಕೈ ಚಾಚುವ
ಭ್ರಷ್ಟಾಚಾರಿಗಳಿನ್ನು ನಿನ್ನ ಮಡಿಲಲ್ಲಿದ್ದಾರೆ
ಹೇ ಭಾರತಾಂಬೆ ನೀ ಸ್ವತಂತ್ರಳೇ…?

ಬಟ್ಟೆಗೆ ತಗುಲಿದ ಧರ್ಮ
ಭಾವನೆಗೆ ತಗುಲದಾಯಿತು
ಮಂದಿರಗಳಿಗೆ ತಗುಲಿದ ಧರ್ಮ
ಮಮತೆಗೆ ತಗುಲದಾಯಿತು
ದೇವರಿಗೆ ತಗುಲಿದ ಧರ್ಮ
ದಯೆಗೆ ತಗುಲದಾಯಿತು
ಧರ್ಮದ ನೆಪದಲ್ಲಿ ದೇಶವನ್ನೊಡೆವ
ದೇಶದ್ರೋಹಿಗಳಿನ್ನೂ ನಿನ್ನ ಮಡಿಲಲ್ಲಿದ್ದಾರೆ
ಹೇ ಭಾರತಾಂಬೆ ನೀ ಸ್ವತಂತ್ರಳೇ…?

ಮಂಜುನಾಥ್ ಸಿ ಕೆಂಗಲ್‌ಹಟ್ಟಿ
ಮಂಜುನಾಥ್ ಸಿ ಕೆಂಗಲ್‌ಹಟ್ಟಿ

ಮೂಲತಃ ಕೆಂಗಲ್ ಗೊಲ್ಲರಹಟ್ಟಿ ಗ್ರಾಮದವರಾದ ಇವರು ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ.