ಬದುಕು ಬದಲಾಯಿಸಿದ ಬದುಕು…

ನನ್ನ ಜೀವನದ ಮಹತ್ತರ ತಿರುವಾದ ಪತ್ರಿಕೋದ್ಯಮದ ಆಳ, ಅಗಲದ ಕುರಿತು ತಿಳಿಸಿ, ಕಲಿಸಿದ ಬದುಕು ಕಾಲೇಜಿಗೆ ನಿನ್ನೆಯಿಂದ ವಿದಾಯ ಹೇಳಿ, ಹಳೇ ವಿಧ್ಯಾರ್ಥಿಗಳು ಆಗಿದ್ದಾಯ್ತು..

ಕಾಲೇಜಿನಿಂದ ಸೆಂಡ್ ಆಫ್ ಏನೊ ಮಾಡಿದ್ದಾಯ್ತು, ಆದ್ರೆ ಮೊದಲಿದ್ದ ಸ್ನೇಹಿತರು ಇನ್ನು ಮುಂದೆ ಸಿಗುವುದು ಬಹಳ ವಿಪರೀತ ಸಿಕ್ಕರೂ ಮಾತನಾಡುವುದು ಅಪರೂಪ. ತಮ್ಮ ತಮ್ಮ ಜೀವನದ ಕನಸನ್ನು ನನಸಾಗಿಸಲು, ತಮ್ಮ ಜೀವನವನ್ನು ಮುನ್ನಡೆಸಲು ಮಾಧ್ಯಮ ರಂಗಕ್ಕೆ ಮುನ್ನುಗುತ್ತಿರುವ ಸ್ನೇಹಿತರ ಜೊತೆಗೆ ತಮ್ಮದೇ ಮಾಧ್ಯಮವನ್ನು ಹುಟ್ಟು ಹಾಕುವ ಕನಸನ್ನು ಹೊಂದಿರುವ, ಮಾಧ್ಯಮ ರಂಗ ಹೊರತುಪಡಿಸಿ ಜೀವನ ಸಾಗಿಸುವ ಗುರಿಯಿಂದ ವಿಭಿನ್ನ ಕಲಿಕೆ, ಯೋಚನಾ ಶಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಆತ್ಮೀಯ ಸ್ನೇಹ ಬಳಗಕ್ಕೆ ಅಭಿನಂದನೆಗಳು..

ಜೀವನದಲ್ಲಿ ನಾನು ವಿಧ್ಯಾಭ್ಯಾಸ ಮಾಡಿರುವ ಎಲ್ಲಾ ಶಾಲಾ ಕಾಲೇಜುಗಳಿಗಿಂತ ವಿಭಿನ್ನ ರೀತಿಯ, ವಿಭಿನ್ನ ಆಲೋಚನೆಗಳನ್ನು ಹೊಂದಿರುವ ಗೋಡೆಗಳೇ ಇಲ್ಲದ ನಮ್ಮಿಷ್ಟದಂತೆ ನೇರವಾಗಿ ಮಾತನಾಡುವ, ವರ್ತಮಾನದ ಕುರಿತು ಯೋಚಿಸುವ, ಪ್ರಸ್ತುತ ಕಾಲಮಾನಕ್ಕೆ ಬೇಕಾಗುವ ಅವಶ್ಯಕತೆಗಳನ್ನು ಅರ್ಥೈಸಿಕೊಳ್ಳುವುದರ ಜೊತೆಗೆ ತರಗತಿಯನ್ನು ಹೊರತುಪಡಿಸಿ ಸಮಾಜ, ಕುಟುಂಬವನ್ನು ಹೇಗೆ ನಿಭಾಯಿಸಬೇಕು, ಸಮಾಜದಲ್ಲಿ ಹೇಗಿರಬೇಕು ಎನ್ನುವಂತಹ ಹಲವಾರು ವಿಷಯಗಳನ್ನು ಕಲಿತದ್ದು ಇಲ್ಲಿಯೇ. ಇನ್ನೂ ಬದುಕು ಸಂಸ್ಥೆಯಲ್ಲಿದ್ದಾಗ ಆಗುವ ಒಂದಿಷ್ಟು ಜಗಳ, ವೈಮನಸುಗಳನ್ನು ನಿಭಾಯಿಸಲು ಸಲಹೆ ನೀಡಿದ ಮುಂದೆ ಜೀವನದಲ್ಲಿಯೂ ಹೀಗೆ ಇರುತ್ತೆ ಎಲ್ಲವನ್ನೂ ಸಂಬಾಳಿಸಿಕೊಂಡು ಹೋಗಬೇಕು ಎನ್ನುವ ಎಲ್ಲರನ್ನೂ ಸಮಾನರಂತೆ ಕಾಣುವ ಸಂಸ್ಥೆಯಲ್ಲಿ ಕಲಿಯಲು ಅವಕಾಶ ಕೊಟ್ಟಿದ್ದಕ್ಕೆ ಸಂಸ್ಥೆಗೆ ಋಣಿ…

ಇನ್ನು ನನ್ನ ಜೀವನಕ್ಕೆ ಮಾತ್ರವಲ್ಲದೇ ನನ್ನಂತಹ ಹಲವಾರು ಜನರ ಜೀವನಕ್ಕೆ ತಿರುವು ನೀಡಿದ್ದ, ನೀಡುತ್ತಿರುವ ಸಂವಾದ-ಬದುಕು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೂ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಪತ್ರಿಕೋದ್ಯಮದ ಅನುಭವಗಳನ್ನು ತಿಳಿಸುವುದರ ಜೊತೆಗೆ ವಿಭಿನ್ನವಾಗಿ ಸುದ್ದಿ ಸಂಗ್ರಹ, ಅನುವಾದದ ಬಗ್ಗೆ ತಿಳಿಸಿದ ಕಲಿಕೆಯಲ್ಲಿ ಜೊತೆಗಿದ್ದ ಪತ್ರಕರ್ತರಿಗೆ, ಸೀನಿಯರ್ಸ್ ಗಳು ಮಾತ್ರವಲ್ಲದೇ ಮುಖ್ಯವಾಗಿ 9 ತಿಂಗಳು ಜೊತೆಗಿದ್ದ ಪತ್ರಿಕೋದ್ಯಮ ವಿಭಾಗದ ಮುರಳಿ ಸರ್, ಕವಿಯೆಂದೇ ಕರೆಸಿಕೊಳ್ಳಲು ಇಷ್ಟಪಡುವ ದಯಾನಂದ ಸರ್, ಶಾಲಿನಿ ಮೇಡಂ ಒಟ್ಟಾರೆಯಾಗಿ ಎಲ್ಲರಿಗೂ ಕೃತಜ್ಞತೆಗಳು…

ಸೋಮಶೇಖರ ಜಾಲಿಬೆಂಚಿ
ಸೋಮಶೇಖರ ಜಾಲಿಬೆಂಚಿ

ಟಿವಿ 5-ವರದಿಗಾರರು , ಬೆಂಗಳೂರು