ಕೋಪ

ಹೇ ಕೋಪವೇ ಯಾಕಿಷ್ಟು ಪ್ರೀತಿ ನಿನಗೆ,
ನನ್ನ ಮೇಲೆ ಯಾಕಿಷ್ಟು ಕಾಳಜಿ,
ಇದು ದಿನೇ ದಿನೇ ಅತಿಯಾಗುತ್ತಿದೆ,
ನಿನಗೆ ಗೊತ್ತಿಲ್ಲವೇ ಅತಿಯಾದರೆ ಅಮೃತವೂ ವಿಷವಂತ,
ನನ್ನನ್ನ ಏಕಾಂಗಿಯಾಗಿ ಇರಲಿಕ್ಕೆ ಬಿಡು.

ಯಾರಾದರೂ ನನ್ನಿಂದ ಕೊಂಚವೇ ದೂರವಾಗುತ್ತಿದ್ದಾರೆ
ಎನ್ನುವ ಸಣ್ಣ ಸುಳಿವು ಸಿಗುವಷ್ಟರಲ್ಲಿ
ಎಲ್ಲೋ ಇರುವ ನೀ ನನ್ನೆಡೆಗೆ ಬರುವೆ,
ನೀ ಬರುವುದಲ್ಲದೆ ನಿನ್ನ ಸ್ನೇಹಿತರಾದ
ಬೇಸರ, ಅಳು, ಚಿಂತೆಯನ್ನೂ ಕರೆತರುವೆ.
ನೀ ನಿನ್ನ ಪ್ರೀತಿಯ ಮೇಲೆ ಅತಿಯಾದ ನಂಬಿಕೆ
ಇಟ್ಟು ಕಾಳಜಿ ಮಾಡಬೇಡ,
ತಿಳಿದಿದೆ ಯಾರು ಯಾರಿಗೂ ಶಾಶ್ವತವಲ್ಲ ಎಂದು,
ನಿನ್ನ ಪ್ರೀತಿಯ ಒಂದೇ ಕಾರಣಕ್ಕೆ,
ನಾ ಎಲ್ಲರಲ್ಲೂ ಕೆಟ್ಟವಳಾಗುತ್ತಿರುವೆ.

ಹೇ ಕೋಪವೆ…
ದಿನೇ ದಿನೇ ನೀನ್ಯಾಕಿಷ್ಟು ಸ್ವಾರ್ತಿಯಾಗುತ್ತಿದ್ದಿಯ,
ನೀನೊಬ್ಬನೇ ನನ್ನ ಜೊತೆ ಇರಬೇಕೆಂಬ
ಹುಚ್ಚು ಸ್ವಾರ್ಥ ಯಾಕೆ ನಿನಗೆ,
ನನ್ನ ಬಾಲ್ಯ ಸ್ನೇಹಿತರಾದ
ತಾಳ್ಮೆ, ಧೈರ್ಯ, ನಗು ಎಲ್ಲವನ್ನೂ ನೀ
ಬಂದಾಕ್ಷಣ ನನ್ನಿಂದ ದೂರ ಮಾಡುವೆ,
ಅವುಗಳಿಗೂ ಆಸೆ ಇರಬಹುದಲ್ವ
ನನ್ನೊಡನೆಯೇ ಇರಲು,
ನಾ ಅವುಗಳ ಜೊತೆ ಸಂತೋಷದಿಂದ ಇರುತ್ತೇನೆ,
ಆದರೆ ಅವುಗಳು ನನ್ನ ಜೊತೆ ಇರಲು ಇಷ್ಟ ಪಡುತ್ತಿಲ್ಲ ,
ಕೇವಲ ನಿನ್ನ ಪ್ರೀತಿಯ ಕಾರಣದಿಂದಲೆ,

ಈ ನಿನ್ನ ಹೆಚ್ಚಿನ ಪ್ರೀತಿ, ಕಾಳಜಿ ಭಾರವಾಗುತ್ತಿದೆ ನನಗೆ,
ಆದಷ್ಟು ದೂರವಿರು ನನ್ನಿಂದ,
ನೀ ಇಲ್ಲದೆಯೂ ನಾ ಇರಬಲ್ಲೆ ಎಂದು
ನಾ ನಿರೂಪಿಸಲಿಕ್ಕೆ ಒಂದವಕಾಶ ಕೊಡು ನನಗೆ.

ಅಂಜನಿ ಶೆಟ್ಟಿ
ಅಂಜನಿ ಶೆಟ್ಟಿ

ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನವರಾದ ಇವರು ಸದ್ಯ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದು, ಮುಖ್ಯ ವೇದಿಕೆಯಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕವಯಿತ್ರಿಯೂ ಹೌದು.