ಬಣ್ಣದ ಕನಸು

ಕಾಮನ ಬಿಲ್ಲಿನ ಕನಸುಳ್ಳವರು ನಾವು
ಕನಸ ನನಸು ಮಾಡಬಲ್ಲವರು ನಾವು

ರಂಗು ರಂಗಿನ ಬೆಳಕಲಿ
ಮೂಡುವ ಚಿತ್ತಾರದ
ಪರದೆಯಲಿ ಬೆಳ್ಳಿ ಬೆಳಕು
ಮೂಡಿಸುವವರು ನಾವು

ಕನಸು ಕಾಣುವ ಕನಸು ಕಟ್ಟುವ
ನನಸು ಮಾಡುವ ಕೆಚ್ಚುಳ್ಳವರು ನಾವು
ಬಣ್ಣಬಣ್ಣದ ರಂಗೋಲಿಯಲಿ ಭವಿಷ್ಯದ
ಚಿತ್ತಾರ ಮೂಡಿಸಬಲ್ಲವರು ನಾವು

ನಂಜಿಬಟ್ಟಲ ಕಾಡಿಗೆ ಕಣ್ಣಲಿ
ಕನಸರಳಿಸಬಲ್ಲವರು ಸುರಮಾದ(ಕಾಡಿಗೆ)
ಸುಂದರಿಯಲಿ ಭೂರಮೆಯ ಬಣ್ಣಗಳಲ್ಲಿ
ಒಂದಾಗುವವರು ನಾವು

ಸಪ್ತಸ್ವರಗಳ ಜೋಗಳದ
ನಾದದಲಿ ಮೂಡಿದ ಸಪ್ತ ಬಣ್ಣಗಳು
ಕಪ್ಪು, ಕೆಂಪು ಕೇಸರಿ, ಹಳದಿ,ಹಸಿರು
ಎಲ್ಲಾ ಬಣ್ಣಗಳಲ್ಲಿ ಮಿಂದೆದ್ದವರು ನಾವು

ಕ್ರಿಸ್ತ, ಪೈಗಂಬರ, ಬುದ್ಧ ಬಸವ ಮಹಾವೀರ
ಕನಕ ಪುರಂದರ ಕಬೀರ ಶಿಶುನಾಳ
ಹುಲಿಗೆವ್ವ, ಪಟಲಮ್ಮ, ಮಂಟೆಸ್ವಾಮಿಯ
ಪರಂಪರೆಯ ಕುಡಿಗಳು ನಾವು

ಎಲ್ಲಾ ಬಣ್ಣಗಳ ಬಗೆ ಬಗೆ ಹೂಗಳ
ಸುಂದರ ಬನವಿದು ರಸಭರಿತ ಜೇನಿದು
ಸಿಹಿ ಜೇನಿನ ಮುನ್ನುಡಿಯೊಂದಿಗೆ
ಕಟ್ಟುತ್ತೇವೆ ಹೂಸ ನಾಡೊಂದನ್ನ
ಬರೆಯುತ್ತೇವೆ ಹೊಸ ಭಾಷ್ಯವನ್ನ

ಕಾಮನ ಬಿಲ್ಲಿನ ಕನಸುಳ್ಳವರು ನಾವು
ಕನಸ ನನಸು ಮಾಡಬಲ್ಲವರು ನಾವು

ಇಶ್ರತ್ ನಿಸಾರ್
ಇಶ್ರತ್ ನಿಸಾರ್

ಪತ್ರಕರ್ತೆ ಮತ್ತು ಕವಯಿತ್ರಿ ಆಗಿರುವ ಇವರು ಬೆಂಗಳೂರಿನ ಸಂವಾದ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.