ಅವ್ವ

ನೀ ನಡೆದ ಹೆಜ್ಜೆಗರುತುಗಳು
ಹಾದಿ ಕಲ್ಲು ಮುಳ್ಳು
ಗರಿಮನೆ ನೆರಳು ಬೆಳಕು
ಹಿತ್ತಲ ಒಣ ಕಡ್ಡಿ ಮೇಲೆ
ಹಬ್ಬಿದ ಹೂ ಬಳ್ಳಿ
ಕಣ್ ಮಸುಕಾಗಿಸುವ ಕತ್ತಲೆತ್ತಿ
ದೂಳು, ಬಿಸಿಲುಗಳ ಕೊಡವಿ ಎಲ್ಲ ದಾಟಿಸಿ
ನೆತ್ತಿ ಸೂರ್ಯನಿಗೂ
ತಗ್ಗದೆ ನಡೆದಿದ್ದ ಆ ದಿನಗಳು

ಕಗ್ಗಲ್ಲ ಮಣ್ಣ ಹೊತ್ತು
ಭಂಗಗಳ ನೀಗಿ
ಹರಿವ ನೀರ ದಾರಿ
ತೋರಿದ ನಿನ್ನ ತೋರು ಬೆರಳ
ತುದಿ ಹಿಡಿದು
ನಡೆದುದ್ದರ ಪರಿಣಾಮ…
ನಾನು ಮನುಷ್ಯನಂತಾಗುತ್ತಿರುವೆ
ಕಣ್ಣ ಕತ್ತಲೆಗೆ
ಚಾಟಿ ಬೀಸುವ
ಮಿಂಚುಕೋಲಿನ ನಿನ್ನ ಬೀಸುಗಳಲಿ
ಎದೆಯೊಳಗೆ ವಿಶ್ವಾಸದ ಬುಗ್ಗೆಗಳು ಏಳುತ್ತಿದ್ದೋ
ನಿನ್ನ ಒರಟು
ಮಾತು, ಕಠೋರತೆಯಲ್ಲಿ
ಸಂಕಷ್ಟಗಳ ಸರಪಳಿ ಹರಿವ
ಕಸುವು, ಕಿಚ್ಚುಗಳು….
ಆಗ ನನಗೆ ಅರ್ಥವಾಗುತ್ತಿರಲಿಲ್ಲ
ಈಗ ನೀನು
ನನ್ನ ಆತ್ಯಂತಿಕವಾಗಿರುವ ಜೀವನಶಾಲೆ
ನಿನ್ನ ಸೆರಗ ಗಂಟಿನ
ತಿಂಡಿ, ಕಾಸು
ಎಲ್ಲವೂ ನನ್ನ ಹೆಜ್ಜೆಗೆ ಶಕ್ತಿ ನೀಡಿ
ಎತ್ತರದ ನೀಲಮುಗಿಲ ಆಗಸ
ಸೂರ್ಯ, ಚಂದ್ರರ ಕಣ್ ತುಂಬಿಕೊಂಡು
ನಡೆವ ಕಸುವೆಚ್ಚಿಸುತ್ತಲೇ ಇವೆ
ಕಾಲದ ಕಣ್ಣಲಿ
ನೀ ಕಾಣೆಯಾದರೂ
ನೀನು ಬಿಟ್ಟು ಹೋಗಿರುವ ಅವ್ವ ಎಂಬ ತವರು
ನನ್ನಾತ್ಮದ ತಳ, ತುದಿ ಅಂತ್ಯಗಳೆಲ್ಲಿಯೂ
ಹಸಿ ಮೂಲಬೇರು
ನಿನ್ನಪ್ಪಿಯೇ
ಈಗಲೂ ನಾನು
ಚಿಗುರುತ್ತಲೇ ಇರುವೆ
ಮಗುವಾಗಿ, ಮನುಷ್ಯನಾಗಿ….
ಕೃತಜ್ಞತೆ, ಹಾಗೆ ಹೀಗೆ
ಪದವ್ಯಯ ಯಕಶ್ಚಿತ್….
ನಡೆಯುತ್ತಲೇ ಇರುವೆ
ನಿನ್ನ ಜೊತೆ
ಉಸಿರೊಳಗೆ ನಿ ಕೊಟ್ಟ ಕಸುವು,
ಜೀವದ್ರವ್ಯವ ತುಂಬಿಕೊಂಡು….

ಪ್ರಕಾಶ್ ಮಂಟೇದ
ಪ್ರಕಾಶ್ ಮಂಟೇದ

ವೃತ್ತಿಯಿಂದ ಕನ್ನಡ ಅಧ್ಯಾಪಕರು ಹಾಗೂ ಪ್ರವೃತ್ತಿಯಿಂದ ಕವಿ ರಂಗಕರ್ಮಿ ಮತ್ತು ವಿಮರ್ಶಕ.