ವಿ ದ ಪೀಪಲ್‌ ಆಫ್ ಇಂಡಿಯಾ

ದೃಶ್ಯ ಕಲೆಗಿರುವ ತಾಕತ್ತು ಬರವಣಿಗೆಗೆ ಇಲ್ಲ ಎಂಬುದು ವಿ ದ ಪೀಪಲ್ ಆಫ್ ಇಂಡಿಯಾ ನಾಟಕವನ್ನು ನೋಡಿದ ಮೇಲೆ ನನಗೆ ಬಲವಾಗಿ ಅನಿಸಿತು. ಸಂವಿಧಾನದ ಬಹುಮುಖ್ಯವಾದ ಆಶಯವನ್ನು ಒಂದರಿಂದ ಒಂದೂವರೆ ಗಂಟೆಯೊಳಗೆ ಪ್ರೇಕ್ಷಕರಿಗೆ ಮನಮುಟ್ಟುವಂತೆ ದಾಟಿಸುವಲ್ಲಿ ರಂಗಾಯಣ ತಂಡದ ಕಲಾವಿದರು ಸಂಪೂರ್ಣವಾಗಿ ಯಶಸ್ವಿಯಾದರು. ನಾಟಕ ಮುಗಿಯುವವರೆಗೆ ಇಡೀ‌ ಪ್ರೇಕ್ಷಕರು ಕದಲದಂತೆ‌ ನಾಟಕವನ್ನು ತಮ್ಮದಾಗಿಸಿಕೊಂಡರು.

ಶಾಸನ‌ ಸಭೆಯಲ್ಲಿ ಸಂವಿಧಾನವು ಅಂಗೀಕಾರಗೊಂಡಾಗ ಭಾರತದ ಮೊದಲ ಪ್ರಧಾನಿ ನೆಹರು, ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ‌ ಪಟೇಲ್‌ ‌ಸೇರಿದಂತೆ‌ ಪ್ರಮುಖರು‌ ಸಂವಿಧಾನ ಹಾಗೂ ಅದರ ರಚನೆಕಾರ ಡಾ.ಬಿ.ಆರ್.ಅಂಬೇಡ್ಕರ್‌ ಕುರಿತು ಮಾತನಾಡಿದ‌ ಸಂದರ್ಭವನ್ನು ರಂಗದ ಮೇಲೆ ದೃಶ್ಯ ರೂಪಕ್ಕೆ ಇಳಿಸಿದ್ದನ್ನು ಕಣ್ತುಂಬಿಸಿಕೊಳ್ಳಲು ಸಾಧ್ಯವಾಯಿತು. ಸಂವಿಧಾನ ಪ್ರಸ್ತಾವನೆಯ ಒಂದೊಂದು ವಾಕ್ಯವನ್ನು ಒಬ್ಬೊಬ್ಬ ಕಲಾವಿದ ಹೇಳಿದ್ದು, ಆ ವಾಕ್ಯವನ್ನು ಅವರು ಹೇಳುವಾಗ ಆ ಧ್ವನಿಯಲ್ಲಿದ್ದ ಗತ್ತು ಹಾಗೂ ಆತ್ಮವಿಶ್ವಾಸವು ಕುಳಿತಿದ್ದ ಪ್ರೇಕ್ಷಕರ ಹೃದಯದೊಳಕ್ಕೂ ನಾಟಿಸಿದಂತಿತ್ತು.

ಸಂವಿಧಾನ ಜಾರಿಗೊಂಡು ಏಳು ದಶಕಗಳೇ ಕಳೆದಿದ್ದರೂ ಕನಿಷ್ಟ ಮನೆಯೂ ಇಲ್ಲದೆ ಭಿಕ್ಷೆ ಬೇಡುತ್ತಲೆ ಊರೂರು ತಿರುಗಾಡುತ್ತಿರುವ ಜಾತಿ ಸಮುದಾಯಗಳಿಗೂ ಹಾಗೂ ದೇಶದಲ್ಲಿ ಎಲ್ಲ ಸಂಪನ್ಮೂಲಗಳನ್ನು ಪಡೆದು ಜೀವಿಸುತ್ತಿರುವ ಮೇಲ್ವರ್ಗದ ಸಾಮಾನ್ಯ ಜನಕ್ಕೂ ಸಂವಿಧಾನ ಅಂದ್ರೇನು, ಅದರ ಆಶಯಗಳೇನು ಎಂಬುದು ಇಂದಿಗೂ ಅರಿವಿಗೆ ಬಂದಿಲ್ಲ. ಅಂದ್ರೆ, ಇಲ್ಲಿಯರೆಗೂ ರಾಜ್ಯ, ದೇಶವನ್ನಾಳಿದ ಸರಕಾರವಾಗಲಿ, ಅಧಿಕಾರಿ ವರ್ಗವಾಗಲಿ ಸಂವಿಧಾನದ ನಿಜವಾದ ಆಶಯ, ಗುರಿಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಸುಳ್ಳು. ಅದರ ಆಶಯಗಳನ್ನು ಜನರಿಗೆ ತಲುಪದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆಂಬುದನ್ನು ನಾಟಕ ನೋಡಿದ ನನಗೆ ಖಾತ್ರಿ‌ ಆಯಿತು.

ಇದೇ ಹೊತ್ತಿನಲ್ಲಿ ಸಂವಿಧಾನ ಅಂದ್ರೆ ಕೇವಲ ಪುಸ್ತಕವಲ್ಲ, ಕಾನೂನು ಮಾತ್ರವಲ್ಲ. ಅದು ದೇಶದ ಪ್ರತಿಯೊಬ್ಬ ಪ್ರಜೆಯ ಸ್ವಾಭಿಮಾನ, ಸಮಾನತೆ, ಘನತೆ, ಸೌಹಾರ್ದತೆ, ಸಹೋದರತೆ ಹಾಗೂ ಸೌಹಾರ್ದತೆಯಿಂದ ಬದುಕಲಿಕ್ಕಿರುವ ದಾರಿ ಎಂಬುದು ಗೊತ್ತಾದ ದಿನ ಕಪಟ ರಾಜಕಾರಣಿಗಳಿಗೆ, ಭ್ರಷ್ಟರಿಗೆ, ಕೋಮು ಕ್ರಿಮಿಗಳಿಗೆ ಉಳಿಗಾಲವಿಲ್ಲ ಎಂಬುದನ್ನು ವಿ ದ ಪೀಪಲ್ ಆಫ್ ಇಂಡಿಯಾ ನಾಟಕ‌ವು ಜನರ ಮನಗಳಿಗೆ ಭಿತ್ತುವಲ್ಲಿ ಯಶಸ್ವಿಯಾಗಿದೆ.

ಮಂಜುನಾಥ ದಾಸನಪುರ
ಮಂಜುನಾಥ ದಾಸನಪುರ

ಬೆಂಗಳೂರು.
ವೃತ್ತಿಯಿಂದ ಪತ್ರಕರ್ತರಾಗಿರುವ ಇವರು ಕವಿಗಳು, ಬರಹಗಾರರೂ ಹೌದು